ರೈನ್ಬೋ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಕೆ. ಶಮಂತ್ರ ನಿರ್ಮಾಣದ ಚೊಚ್ಚಲ ಚಿತ್ರವಾದ ಪ್ರೀತಿ ಕಿತಾಬು ಚಿತ್ರದ ಆಡಿಯೋ ರೈಟ್ಸ್ ಅನ್ನು ಡೀಬೀಟ್ಸ್ ಸಂಸ್ಥೆಯು ಖರೀದಿಸಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಚಿತ್ರದ ಹಾಡುಗಳು ಮಾರುಕಟ್ಟೆಗೆ ಬರಲಿದೆ. ಡೀ ಬೀಟ್ಸ್ನ ಮಾಲಿಕರಾದ ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣರವರು ಪ್ರೀತಿಕಿತಾಬಿನ ಹಾಡುಗಳನ್ನು ಕೇಳಿ, ಮೆಚ್ಚಿ, ಇದನ್ನು ತನ್ನ ಸಂಸ್ಥೆಯ ಮೂಲಕ ಹೊರತರುತ್ತೇನೆ ಎಂದು ಚಿತ್ರತಂಡಕ್ಕೆ ಭರವಸೆ ಕೊಟ್ಟಿರುವುದು ಇಡೀ ಚಿತ್ರತಂಡಕ್ಕೆ ಖುಷಿಕೊಟ್ಟಿದೆ.
ವಿ.ಮನೋಹರ್ ಅವರ ಸಂಗೀತ ಮತ್ತು ಸಾಹಿತ್ಯವಿರುವ ಪ್ರೀತಿಕಿತಾಬು ಚಿತ್ರದಲ್ಲಿ ಐದು ಹಾಡುಗಳಿದ್ದು, ಜಾವಿದ್ ಅಲಿ, ಟಿಪ್ಪು, ರಾಜೇಶ್ ಕೃಷ್ಣನ್, ಅನುರಾಧ ಭಟ್ ಮತ್ತು ಚಿತ್ರದ ಟೈಟಲ್ ಟ್ರಾಕನ್ನು ಪವರ್ ಸ್ಟಾರ್ ಪುನಿತ್ ರಾಜ್ಕುಮಾರ್ ಅವರು ಹಾಡಿದ್ದಾರೆ.
ಶೇಖಡ ೯೦ರಷ್ಟು ಸಾಗರದ ಸುತ್ತ ಮುತ್ತಲು.. ಜೋಗ, ಇಕ್ಕೇರಿ, ಭೀಮೇಶ್ವರ, ಕೊಡಚಾದ್ರಿ, ಸಿಗಂಧೂರ್ ಲಾಂಚ್ ಮತ್ತು ಶರಾವತಿಯ ಹಿನ್ನೆಲೆ ನೀರಿನ ಹತ್ತಿರ ಚಿತ್ರದ ಚಿತ್ರೀಕರಣವನ್ನು ಚಿತ್ರತಂಡ ಮಾಡಿದೆ. ಇಲ್ಲಿ ಸಾಗರದ ಹುಡುಗ ನೆಹಾಲ್ ನಾಯಕನಾಗಿ ಪರಿಚಯವಾಗುತ್ತಿದ್ದು ಇವರಿಗೆ ಜೋಡಿಯಾಗಿ ದುನಿಯಾ ಖ್ಯಾತಿಯ ರಶ್ಮಿ ಅಭಿನಯಿಸಿದ್ದಾರೆ. ದ್ವಿತೀಯ ನಾಯಕಿಯಾಗಿ ಮೂರ್ವಿ ಕನ್ನಡಕ್ಕೆ ಪರಿಚಯವಾಗುತ್ತಿದ್ದು ಇನ್ನುಳಿದ ಪಾತ್ರಗಳಲ್ಲಿ ಶೋಭರಾಜ್, ರಮೇಶ್ ಭಟ್, ಹೊನ್ನಾವಳಿ ಕೃಷ್ಣ, ಬ್ಯಾಂಕ್ ಜನಾರ್ಧನ್, ರಾಕ್ಲೈನ್ ಸುಧಾಕರ್, ವಿ.ಮನೋಹರ್, ಮಿಮಿಕ್ರೀ ಗೋಮಿ, ನಿನಾಸಂ ಯಶ್ವಂತ್, ಸಂಗೀತ ಮುಂತಾದವರು ಅಭಿಯಿಸಿದ್ದಾರೆ.
ಇಲ್ಲಿ ಕಥೆ ನಾಯಕನದ್ದೇ ಅಗಿದ್ದು, ಚಿತ್ರವನ್ನು ವಿಠಲ್ ಭಟ್ ನಿರ್ದೇಶಿಸಿದ್ದಾರೆ. ಛಾಯಾಗ್ರಹಣ ಗಣೇಶ್ ಹೆಗಡೆ, ಸಂಕಲನ ಮೋಹನ್ ಕಾಮಾಕ್ಷಿ, ನೃತ್ಯ ಮನು ಮಾಡಿದ್ದಾರೆ. ಈಗಾಗಲೇ ಚಿತ್ರದ ಹಿನ್ನೆಲೆ ಸಂಗೀತ ಮುಗಿದ್ದಿದ್ದು ಇನ್ನುಳಿದ ಕಾರ್ಯದಲ್ಲಿ ನಿರತರಾಗಿದೆ ಚಿತ್ರತಂಡ. ಅಂದುಕೊಂಡಂತೆ ಎಲ್ಲವೂ ಸಕಾಲದಲ್ಲಿ ನಡೆದರೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಚಿತ್ರವನ್ನೂ ಪ್ರೇಕ್ಷಕರ ಮುಂದೆ ತರಲು ಪ್ರಯತ್ನಿಸುತ್ತಿದ್ದಾರೆ ಚಿತ್ರದ ನಿರ್ದೇಶಕ ವಿಠಲ್ ಭಟ್.